ಬಿಜೆಪಿಗೆ ಛೀಮಾರಿ ಹಾಕಿ ಕಾಂಗ್ರೇಸ್ ಮೈತ್ರಿಗೆ ಜೈ ಎಂದ ಜಾರ್ಖಂಡ್ ಮತದಾರ

0
216

ರಾಂಚಿ, ಡಿ.23-ತೀವ್ರ ಕುತೂಹಲ ಕೆರಳಿಸಿದ್ದ ಜಾರ್ಖಂಡ್ ವಿಧಾನಸಭೆಯ 81 ಕ್ಷೇತ್ರಗಳ ಚುನಾವಣಾ ಫಲಿತಾಂಶ ಪ್ರಕಟಗೊಂಡಿದ್ದು, ಹಾವು-ಏಣಿ ಆಟದ ನಂತರ ಕಾಂಗ್ರೆಸ್-ಜಾರ್ಖಂಡ್ ಮುಕ್ತಿ ಮೋರ್ಚಾ(ಜೆಎಂಎಂ)-ರಾಷ್ಟ್ರೀಯ ಜನತಾ ದಳ(ಆರ್‍ಜೆಡಿ) ಮೈತ್ರಿ ಕೂಟ ಗೆಲುವು ಸಾಧಿಸಿ ಸರ್ಕಾರ ರಚನೆಯತ್ತ ದಾಪುಗಾಲು ಹಾಕಿದೆ.

ಎರಡನೇ ಬಾರಿ ಅಧಿಕಾರ ಗದ್ದುಗೆಗೇರುವ ಮುಖ್ಯಮಂತ್ರಿ ರಘುವರದಾಸ್ ನೇತೃತ್ವದ ಬಿಜೆಪಿ ಪಕ್ಷಕ್ಕೆ ಈ ಫಲಿತಾಂಶದಿಂದ ಭಾರೀ ಮುಖಭಂಗವಾಗಿದೆ. ಇಂದು ಮುಂಜಾನೆ 7 ಗಂಟೆಗೆ ಮತ ಎಣಿಕೆ ಕಾರ್ಯ ಆರಂಭವಾಯಿತು. ಆರಂಭದಿಂದಲೂ ಬಿಜೆಪಿ ಮತ್ತು ಮಿತ್ರಕೂಟಗಳ ನಡುವೆ ತೀವ್ರ ಹಣಾಹಣಿ ಕಾರಣವಾಗಿದ್ದ ಈ ಫಲಿತಾಂಶದಲ್ಲಿ ಬೆಳಗ್ಗೆ 11 ಗಂಟೆ ಹೊತ್ತಿಗೆ ಕಾಂಗ್ರೆಸ್-ಜೆಎಂಎಂ ಮತ್ತು ಆರ್‍ಜೆಡಿ ಮೈತ್ರಿಕೂಟ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು.

ಮೂರು ಪಕ್ಷಗಳ ಮೈತ್ರಿಕೂಟ ಒಟ್ಟು 42 ಸ್ಥಾನಗಳನ್ನು ಗಳಿಸಿದೆ. ಇದು ಸರ್ಕಾರ ರಚನೆಗೆ ಬೇಕಾಗುವಷ್ಟು ಸರಳ (42 ಮ್ಯಾಜಿಕ್ ನಂಬರ್) ಬಹುಮತವಾಗಿದೆ. ಗೆಲುವಿನ ಭಾರೀ ನಿರೀಕ್ಷೆ ಹೊಂದಿದ್ದ ಬಿಜೆಪಿ 28 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದೆ.ಜಾರ್ಖಂಡ್ ವಿಕಾಸ ಮೋರ್ಚಾ 4 ಸ್ಥಾನ, ಎಜೆಎಸ್‍ಯು-3 ಮತ್ತು ಪಕ್ಷೇತರರು 4 ಸ್ಥಾನಗಳಲ್ಲಿ ವಿಜಯಿಯಾಗಿದ್ದಾರೆ.

ಅತಿ ದೊಡ್ಡ ಪಕ್ಷವಾಗಿ ಕಾಂಗ್ರೆಸ್ ಹೊರಹೊಮ್ಮುತ್ತಿದ್ದಂತೆ ಪಕ್ಷದ ಮುಖಂಡರು ಸರ್ಕಾರ ರಚನೆ ಪ್ರಕ್ರಿಯೆಯನ್ನು ಆರಂಭಿಸಿದ್ದಾರೆ. ಜಾರ್ಖಂಡ್ ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸಾಗಿದ್ದು, ಮುಂದಿನ ಬೆಳವಣಿಗೆ ಕುತೂಹಲಕಾರಿಯಾಗಿದೆ.ಮೈತ್ರಿಕೂಟದ ಒಮ್ಮತದ ಮುಖ್ಯಮಂತ್ರಿ ಯಾರಾಗಬೇಕು ಎಂಬ ಬಗ್ಗೆ ಈ ಪಕ್ಷಗಳ ನಾಯಕರು ಗಹನ ಸಮಾಲೋಚನೆಯಲ್ಲಿ ತೊಡಗಿದ್ದಾರೆ. ಇಂದು ಮಧ್ಯಾಹ್ನ ನಂತರ ಸ್ಪಷ್ಟ ಚಿತ್ರಣ ಲಭಿಸಲಿದೆ.

81 ಸದಸ್ಯ ಬಲದ ಜಾರ್ಖಂಡ್ ವಿಧಾನಸಭೆಗೆ ಒಟ್ಟು ಐದು ಹಂತಗಳಲ್ಲಿ ಚುನಾವಣೆ ನಡೆದಿತ್ತು. ನವೆಂಬರ್ 30, ಡಿಸೆಂಬರ್ 7, 12, 16 ಮತ್ತು 20ರಂದು ನಡೆದ ಚುನಾವಣೆಗಳಲ್ಲಿ ಬಿರುಸಿನ ಮತದಾನವಾಗಿತ್ತು. ಮುಖ್ಯಮಂತ್ರಿ ರಘುವರ ದಾಸ್ ನೇತೃತ್ವದ ಬಿಜೆಪಿ ಎರಡನೇ ಬಾರಿ ಪುನರಾಯ್ಕೆಯಾಗುವ ವಿಶ್ವಾಸದಲ್ಲಿತ್ತು. ಇದೇ ವೇಳೆ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರೆಯುವುದನ್ನು ತಡೆಯುವ ಉದ್ದೇಶದಿಂದ ರೂಪುಗೊಂಡಿರುವ ಮೈತ್ರಿಕೂಟವೂ ಜಯದ ಭರವಸೆ ಹೊಂದಿದ್ದವು.

ಕೆಲವು ಚುನಾವಣೋತ್ತರ ಸಮೀಕ್ಷೆಗಳು 2019ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಕಠಿಣ ಸವಾಲು ಎದುರಾಗಲಿವೆ ಎಂದು ಭವಿಷ್ಯ ನುಡಿದಿವೆ. ಇಂಡಿಯಾ ಟುಡೆ-ಮೈ ಆಕ್ಷಿಸ್ ಪೊಲ್‍ಸ್ಟೆರ್ ಸಮೀಕ್ಷೆ ಪ್ರಕಾರ ಕೇಸರಿ ಪಕ್ಷವು, ಕಾಂಗ್ರೆಸ್-ಜೆಎಂಎಂ-ಆರ್‍ಜೆಡಿ ಮೈತ್ರಿಕೂಟಕ್ಕಿಂತ ಸ್ವಲ್ಪ ಹಿನ್ನಡೆ ಅನುಭವಿಸಲಿದೆ ಎಂದು ತಿಳಿಸಿವೆ. ಬಿಜೆಪಿ ಕೇವಲ 22 ರಿಂದ 32 ಸ್ಥಾನಗಳ ನಡುವೆ ಫಲಿತಾಂಶ ಪಡೆಯಲಿದೆ ಎಂದು ಹೇಳಿದ್ದವು.

ಇನ್ನೊಂದೆಡೆ ಸಿ-ವಾಯ್ಸ್ ಎಗ್ಸಿಟ್ ಪೋಲ್ ಬಿಜೆಪಿ 28-36 ಸ್ಥಾನಗಳನ್ನು ಹೊಂದಲಿವೆ ಎಂದು ಭವಿಷ್ಯ ನುಡಿದಿದೆ. ಪೋಲ್ ಆಫ್ ಪೋಲ್ ಸಂಸ್ಥೆ ಪ್ರಕಾರ ಬಿಜೆಪಿ ಗೆಲ್ಲುವ ಸ್ಥಾನಗಳು 29 ಮೀರುವುದಿಲ್ಲ ಎಂದು ಲೆಕ್ಕಾಚಾರ ಮಾಡಿದ್ದವು. ಮತ್ತೊಂದು ಸಮೀಕ್ಷೆ ಹೇಳುವಂತೆ ಈ ಚುನಾವಣೆಯಲ್ಲಿ ಮೈತ್ರಿಕೂಟಕ್ಕೆ ಅನುಕೂಲಕರ ಫಲಿತಾಂಶ ಲಭಿಸಲಿದ್ದು, ಜೆವಿಎಂ ಕೂಡ ತನ್ನ ಪ್ರಾಬಲ್ಯವನ್ನು ಸ್ವಲ್ಪ ಮಟ್ಟಿಗೆ ಹೆಚ್ಚಿಸಿಕೊಳ್ಳುವ ನಿರೀಕ್ಷೆ ಹೊಂದಿತ್ತು.

2014ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 37 ಸ್ಥಾನಗಳನ್ನು ಗಳಿಸಿತ್ತು. ಜೆಎಂಎಂ 19 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಬಳಿಕ ಜೆಎಂವಿ(ಪ್ರಜಾತಾಂತ್ರಿಕ್) ಆರು ಶಾಸಕರ ಬೆಂಬಲದೊಂದಿಗೆ ಬಿಜೆಪಿ ಅಧಿಕಾರಕ್ಕೆ ಬಂದಿತ್ತು.

LEAVE A REPLY

Please enter your comment!
Please enter your name here