ಕೇರಳ ಮಾದರಿ ರಾಜ್ಯದ ಶಾಲೆಗಳಲ್ಲಿ ವಾಟರ್ ಬೆಲ್ ಯೊಜನೆ ಜಾರಿ

0
212

ಬೆಂಗಳೂರು, ಡಿ.23- ಕೇರಳದಲ್ಲಿ ಯಶಸ್ವಿಯಾಗಿ ಜಾರಿಯಾಗುತ್ತಿರುವ ಕುಡಿಯುವ ನೀರಿನ ಬೆಲ್ ಕಾರ್ಯಕ್ರಮವನ್ನು ರಾಜ್ಯದ ಶಾಲೆಗಳಲ್ಲೂ ಜಾರಿಗೊಳಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. ಪ್ರತಿ ದಿನ ಎರಡು ಬಾರಿ ಮಕ್ಕಳಿಗೆ ನೀರು ಕುಡಿಸುವ ಈ ಯೋಜನೆಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಸ್ಪಷ್ಟ ನಿಯಮಾವಳಿಗಳನ್ನು ರೂಪಿಸಿದೆ.

ಪ್ರತಿ ದಿನ ಶಾಲಾ ಅವಧಿಯಲ್ಲಿ ಬೆಳಗ್ಗೆ ಎರಡನೇ ಮತ್ತು ಮೂರನೇ ಅವಧಿಯ ತರಗತಿಗಳ ನಡುವೆ 10 ನಿಮಿಷ ಹಾಗೂ ಮಧ್ಯಾಹ್ನ 3 ಮತ್ತು 4ನೇ ಅವಧಿಯ ತರಗತಿ ನಡುವೆ 10 ನಿಮಿಷ ಸಮಯವನ್ನು ಕುಡಿಯುವ ನೀರಿನ ಬೆಲ್‍ಗಾಗಿ ಮೀಸಲಿರಿಸಿರುವುದಾಗಿ ಇಲಾಖೆ ತಿಳಿಸಿದೆ. ಶಿಕ್ಷಕರು ಈ ಸಮಯದಲ್ಲಿ ವಿದ್ಯಾರ್ಥಿಗಳು ನೀರು ಕುಡಿಯುತ್ತಿರುವುದನ್ನು ಗಮನಿಸಿ ಖಾತ್ರಿ ಪಡಿಸಿಕೊಳ್ಳಬೇಕು. ಬೆಲ್ ಹೊರತು ಪಡಿಸಿದ ಅವಧಿಯಲ್ಲೂ ವಿದ್ಯಾರ್ಥಿಗಳು ಸಹಜವಾಗಿ ನೀರು ಕುಡಿಯಲು ಬಯಸಿದರೆ ಶುದ್ಧ ಕುಡಿಯುವ ನೀರನ್ನು ಪೂರೈಕೆ ಮಾಡಬೇಕೆಂದು ಸುತ್ತೋಲೆ ತಿಳಿಸಿದೆ.

ಬೆಳವಣಿಗೆಯ ಹಂತದಲ್ಲಿ ಮಕ್ಕಳು ಸರಿಯಾಗಿ ನೀರು ಕುಡಿಯುವುದು ಅತ್ಯವಶ್ಯ. ಇಲ್ಲದೇ ಹೋದರೆ ಆರೋಗ್ಯದಲ್ಲಿ ಹಲವಾರು ಸಮಸ್ಯೆಗಳು ಎದುರಾಗುತ್ತವೆ. ಹೀಗಾಗಿ ಮಕ್ಕಳಿಗೆ ನೀರು ಕುಡಿಯುವುದನ್ನು ರೂಢಿಸಬೇಕು ಮತ್ತು ಕಡ್ಡಾಯವಾಗಿ ನೀರು ಕುಡಿಸಬೇಕು ಎಂದು ಇಲಾಖೆ ಅಭಿಪ್ರಾಯಪಟ್ಟಿದೆ. ಶಾಲೆಗಳಲ್ಲಿ ಮಕ್ಕಳಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು.

ಮಕ್ಕಳೇ ಸ್ವತಃ ನೀರನ್ನು ತಂದಿದ್ದರೆ ಅದನ್ನು ಈ ಅವಧಿಯಲ್ಲಿ ಕುಡಿಸಬೇಕು. ಸ್ಥಳೀಯ ಸಂಸ್ಥೆಗಳಾದ ಗ್ರಾಮ ಪಂಚಾಯ್ತಿ, ಪಟ್ಟಣ ಪಂಚಾಯ್ತಿ, ಎಸ್‍ಡಿಎಂಸಿಗಳು ಯಾವುದೇ ಸಂಸ್ಥೆಯ ನೆರವಿನೊಂದಿಗೆ ಆರ್‍ಒ ಪ್ಲಾಂಟ್‍ಗಳನ್ನು ಅಳವಡಿಸಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಮಕ್ಕಳಿಗೆ ನೀರು ಕುಡಿಯಲು ಸಾಕಷ್ಟು ಲೋಟಗಳ ವ್ಯವಸ್ಥೆಯನ್ನು ಮುಖ್ಯ ಶಿಕ್ಷಕರು ಹಾಗೂ ಸಹ ಶಿಕ್ಷಕರು ಮಾಡಬೇಕು.

ಪ್ರತಿ ತರಗತಿಯಲ್ಲೂ ಶುದ್ಧ ಕುಡಿಯುವ ನೀರನ್ನು ಸಂಗ್ರಹಿಸಿಡುವುದು ಮತ್ತು ಅದು ಸ್ವಚ್ಛವಾಗಿದೆಯೇ ಎಂಬುದನ್ನು ಶಿಕ್ಷಕರು ಖಾತ್ರಿ ಪಡಿಸಿಕೊಳ್ಳಬೇಕೆಂದು ಶಿಕ್ಷಣ ಇಲಾಖೆ ಸೂಚನೆ ನೀಡಿದೆ. ಕೇರಳ ಸರ್ಕಾರ ಇತ್ತೀಚೆಗೆ ವಾಟರ್‍ಬೆಲ್ ಯೋಜನೆಯನ್ನು ಜಾರಿಗೆ ತಂದಿತ್ತು. ಅದು ವ್ಯಾಪಕ ಜನ ಬೆಂಬಲಕ್ಕೆ ಕಾರಣವಾಗಿತ್ತು. ಈಗ ಅದೇ ಮಾದರಿಯಲ್ಲೇ ರಾಜ್ಯ ಸರ್ಕಾರ ಕೂಡ ವಾಟರ್‍ಬೆಲ್ ಯೋಜನೆ ಜಾರಿಗೆ ತಂದಿದೆ.

LEAVE A REPLY

Please enter your comment!
Please enter your name here