ಕಲ್ಲಡ್ಕ ಪ್ರಭಾಕರ ಭಟ್ಟರ ಶಾಲೆಯ ಮಕ್ಕಳಿಂದ ಬಾಬ್ರಿ ಮಸೀದಿ ಧ್ವಂಸ!

0
291

ಮಂಗಳೂರು : ಶಿಕ್ಷಣ ರಚನಾತ್ಮಕವಾಗಿ, ಕ್ರಿಯಾಶೀಲವಾಗಿ ಇರಬೇಕೆನ್ನುವುದು ಶಿಕ್ಷಣದ ಮೂಲ ತತ್ವ. ಅದು ಕಟ್ಟುವುದು ಕಲಿಸಿಕೊಡಬೇಕೇ ಹೊರತು ಕೆಡವುವುದನ್ನಲ್ಲ. ಆದರೆ ಮಂಗಳೂರಿನ ಶಾಲೆಯೊಂದರಲ್ಲಿ ಕೆಡವುವುದನ್ನು ಕಲಿಸಿಕೊಟ್ಟಂತಿದೆ.

ಆರ್‌ಎಸ್‌ಎಸ್‌ ಮುಖ್ಯಸ್ಥ ಕಲ್ಲಡ್ಕ ಪ್ರಭಾಕರ ಭಟ್ಟರ ಶ್ರೀರಾಮ ವಿದ್ಯಾಕೇಂದ್ರ ಶಾಲೆಯಲ್ಲಿ ಆಯೋಜಿಸಿದ್ದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಬಾಬ್ರಿ ಮಸೀದಿ ಧ್ವಂಸ ಘಟನೆಯನ್ನು ಪುನರ್‌ಸೃಷ್ಠಿಸಲಾಗಿದೆ.

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕೇಸರಿ-ಬಿಳಿ ತೊಟ್ಟ ಮಕ್ಕಳು ಬಾಬ್ರಿ ಮಸೀದಿಯನ್ನು ಬೀಳಿಸುವ ದೃಶ್ಯವನ್ನು ಪ್ರದರ್ಶಿಸಿದ್ದಾರೆ. ಹಿನ್ನೆಲೆಯಲ್ಲಿ ಶ್ರೀರಾಮ ಚಂದ್ರ ಕೀ ಜೈ, ಭಾರತ ಮಾತಾ ಕೀ ಜೈ ಘೋಷಣೆಗಳು ಕೇಳಿ ಬರುತ್ತವೆ.

ಈ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಕೇಂದ್ರ ಸಚಿವ ಸದಾನಂದಗೌಡ, ಪುದುಚೆರಿ ರಾಜ್ಯಪಾಲೆ ಕಿರಣ್ ಬೇಡಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಸೇರಿ ಇನ್ನೂ ಹಲವು ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಮಕ್ಕಳು ಬಾಬ್ರಿ ಮಸೀದಿಯನ್ನು ಧ್ವಂಸ ಮಾಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕಾರ್ಯಕ್ರಮವು ಟೀಕೆಗೆ ಗುರಿಯಾಗಿದೆ.

ವಿಡಿಯೋ ವೈರಲ್ ಆಗಿರುವ ಕುರಿತು ಮಾತನಾಡಿರುವ ಪ್ರಭಾಕರ ಭಟ್ಟರು, ‘ನಮ್ಮ ಮಕ್ಕಳು ರಾಮ ಮಂದಿರದ ಇತಿಹಾಸದ ಬಗ್ಗೆ ನೃತ್ಯ ರೂಪಕ ಮಾಡಿದ್ದರು. ಅಂದಿನಿಂದ ಹಿಡಿದು ಇತ್ತೀಚಿನ ಸುಪ್ರೀಂಕೋರ್ಟ್ ತೀರ್ಪಿನ ವರೆಗೆ ಎಲ್ಲವನ್ನೂ ನೃತ್ಯರೂಪಕದಲ್ಲಿ ತಂದಿದ್ದರು. ಆದರೆ ಕೆಲವರು ಬಾಬ್ರಿ ಮಸೀದಿ ಧ್ವಂಸದ ವಿಡಿಯೋ ಮಾತ್ರವನ್ನೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ’ ಎಂದರು.

LEAVE A REPLY

Please enter your comment!
Please enter your name here